ಮಾರಸಿಂಹ 1 -

ಎಂಟನೆಯ ಶತಮಾನದಲ್ಲಿದ್ದ ಗಂಗವಂಶದ ಯುವರಾಜ. ಎರಡನೆಯ ಶಿವಮಾರನ ಮಗ. ಇವನಿಗೆ ಲೋಕತ್ರಿನೇತ್ರ ಎಂಬ ಹೆಸರೂ ಇದ್ದಿತು.

788ರಲ್ಲಿ ಅಧಿಕಾರಕ್ಕೆ ಬಂದ ಎರಡನೆಯ ಶಿವಮಾರ ತನ್ನ ಹಿರಿಯರಂತೆಯೆ ರಾಷ್ಟ್ರಕೂಟರ ಪರಮಾಧಿಕಾರವನ್ನು ಪ್ರತಿಭಟಿಸುತ್ತಿದ್ದ. ಆಗ ರಾಷ್ಟ್ರಕೂಟ ಸಿಂಹಾಸನಕ್ಕಾಗಿ ಒಂದನೆಯ ಕೃಷ್ಣನ ಮಕ್ಕಳಾದ ಧ್ರುವನಿಗೂ ಗೋವಿಂದನಿಗೂ ಹೋರಾಟ ನಡೆಯುತ್ತಿತ್ತು. ಶಿವಮಾರ ಗೋವಿಂದನ ಪಕ್ಷ ವಹಿಸಿದ. ಆದರೆ ಹೋರಾಟದಲ್ಲಿ ಧ್ರುವ ಯಶಸ್ವಿಯಾಗಿ ರಾಷ್ಟ್ರಕೂಟ ಸಿಂಹಾಸನ ಧ್ರುವ ಸುಮಾರು 788-89ರ ಅವಧಿಯಲ್ಲಿ ಶಿವಮಾರನಮೇಲೆ ಯುದ್ಧ ಮಾಡಿ ಅವನನ್ನು ಬಂಧಿಸಿ ಸೆರೆಯಲ್ಲಿಟ್ಟ. ಗಂಗ ರಾಜ್ಯಕ್ಕೆ ಧ್ರುವ ತನ್ನ ಹಿರಿಯ ಮಗ ಕಂಭನನ್ನು ರಾಜ್ಯಪಾಲನೆಗೆ ನೇಮಿಸಿದ. 794ರಲ್ಲಿ ಧ್ರುವನ ಮಕ್ಕಳಾದ ಕಂಭ ಮತ್ತು ಗೋವಿಂದರ ನಡುವೆ ಉತ್ತರಾಧಿಕಾರಕ್ಕಾಗಿ ಹೋರಾಟ ಪ್ರಾರಂಭವಾಯಿತು. ಶಿವಮಾರ ತನ್ನ ಪಕ್ಷ ವಹಿಸಬಹುದೆಂಬ ನಿರೀಕ್ಷೆಯಿಂದ ಮೂರನೆಯ ಗೋವಿಂದ ಅವನನ್ನು ಬಿಡುಗಡೆ ಮಾಡಿದ. ಆದರೆ ಶಿವಮಾರ ಕಂಭನ ಪಕ್ಷವಹಿಸಿದ. ದುರದೃಷ್ಟದಿಂದ ಈ ಬಾರಿಯೂ ಶಿವಮಾರ ಬೆಂಬಲಿಸಿದ ಕಂಬ ಸೋತ. ಪುನಃ ಶಿವಮಾರನನ್ನು ಮೂರನೆಯ ಗೋವಿಂದ ಬಂಧಿಸಿ ಸೆರೆಯಲ್ಲಿಟ್ಟ. ತನ್ನ ಅಣ್ಣ ಕಂಭನನ್ನು ಕ್ಷಮಿಸಿ ಪುನಃ ಗಂಗವಾಡಿಯ ರಾಜ್ಯಪಾಲನನ್ನಾಗಿ ನೇಮಿಸಿದ. ಈ ಸಂದರ್ಭದಲ್ಲಿ ಒಂದನೆಯ ಮಾರಸಿಂಹ ಯುವರಾಜನಾಗಿ ಗಂಗಮಂಡಲವನ್ನು ಆಳಿದ.

ಒಂದನೆಯ ಮಾರಸಿಂಹ ತಾನು ಯುವರಾಜನಾದ ಮೂರನೆಯ ವರ್ಷದಲ್ಲಿ ಅಂದರೆ 799ರಲ್ಲಿ ಆಲೂರು ತಾಮ್ರಶಾಸನವನ್ನು ಬರೆಸಿದ್ದಾನೆ. ಈ ಆಧಾರದ ಮೇಲೆ ಅವನು 796 ರಿಂದ ಯುವರಾಜನಾಗಿದ್ದನೆಂದು ಹೇಳಬಹುದು. ಹಾಗೂ ತನ್ನ ತಂದೆ ಸೆರೆಯಲ್ಲಿದ್ದುದರಿಂದ ಮತ್ತು ರಾಷ್ಟ್ರಕೂಟರು ಇವನ ಬಗ್ಗೆ ಸಹಾನುಭೂತಿ ತೋರಿಸುತ್ತಿದ್ದರಿಂದ ಇವನು ಕೆಲವು ಕಾಲ ಗಂಗ ಮಂಡಲದ ಆಡಳಿತವನ್ನು ಪೂರ್ಣ ಹೊತ್ತು ನಡೆಸಿದನೆಂದೂ ತಿಳಿದು ಬರುತ್ತದೆ. ಇವನ ಕಾಲದಲ್ಲಿ ನೀಡಲಾದ ದಾನದತ್ತಿಗಳ ಬಗ್ಗೆ ಶಾಸನಗಳಲ್ಲಿ ಉಲ್ಲೇಖವಿದೆ. ಇವುಗಳಲ್ಲಿ ಇವನ ಆಲೂರು ತಾಮ್ರಶಾಸನ ಪ್ರಮುಖವಾದುದು. ಅದರಲ್ಲಿ ಮಾರಸಿಂಹನನ್ನು ರಾಜ್ಯನೀತಿ ವಿಶಾರದನೆಂದೂ ಅಶ್ವವಿದ್ಯೆಯಲ್ಲಿ ಪ್ರವೀಣನೆಂದೂ ಹಲವು ಯುದ್ಧಗಳ ವಿಜೇತನೆಂದೂ ವೈಭವದಲ್ಲಿ ಮನು ಚಕ್ರವರ್ತಿಗಳನ್ನು ಮೀರಿಸಿದವನೆಂದೂ ರಣದಲ್ಲಿ ರಾಮನೆಂದೂ ಸಚ್ಚಾರಿತ್ರ್ಯ ಉಳ್ಳವನೆಂದೂ ಮತ್ತು ದುಷ್ಟ ಶಿಕ್ಷಕ ಶಿಷ್ಟ ರಕ್ಷಕನೆಂದೂ ವರ್ಣಿಸಲಾಗಿದೆ. ಇದರಲ್ಲಿ ಕೆಲವು ವರ್ಣನೆಗಳು ಸಾಂಪ್ರದಾಯಿಕವೆಂದು ತೋರಿದರೂ ಮಾರಸಿಂಹ ಸಮರ್ಥರಾಜನ ಅನೇಕ ಲಕ್ಷಣಗಳನ್ನು ಪಡೆದಿದ್ದನೆಂಬುದರಲ್ಲಿ ಸಂದೇಹವಿಲ್ಲ, ಇವನಿಗೆ ನೊಳಂಬರು ಸಾಮಂತರಾಗಿದ್ದರು. ಈತ ಜೈನ ಧರ್ಮದ ಬಗ್ಗೆ ಆಸಕ್ತಿ ತಳೆದಿದ್ದರೂ ಇತರ ಧರ್ಮಗಳಿಗೂ ಸಂಪೂರ್ಣ ಪ್ರೋತ್ಸಾಹ ನೀಡಿದೆ. ಅವನ ದಂಡ ನಾಯಕ ಶ್ರೀ ವಿಜಯ ಒಂದು ಜೈನ ದೇವಾಲಯ ಕಟ್ಟಿಸಿದನೆಂದೂ ಅದನ್ನು ನೋಡಿಕೊಳ್ಳುವ ವೆಚ್ಚಕ್ಕಾಗಿ ಒಂದು ಹಳ್ಳಿಯನ್ನು ದಾನ ಮಾಡಿದನೆಂದು ತಿಳಿದು ಬರುತ್ತದೆ. ಮಾರಸಿಂಹನ ಶಾಸನಗಳು 800 ರ ಅನಂತರ ಕಂಡು ಬರದಿರುವುದರಿಂದ ಅವನು ಆ ವರ್ಷ ಮರಣ ಹೊಂದಿರಬೇಕೆಂಬ ಅಭಿಪ್ರಾಯವಿದ್ದರೂ ಶಿವಮಾರನ ಮರಣಾನಂತರ ಅವನ ಮಗ ಮಾರಸಿಂಹನಿಗೂ ಅವನ ಸಹೋದರ ವಿಜಯಾದಿತ್ಯನಿಗೂ ರಾಜ್ಯ ವಿಭಜನೆಯಾಯಿತೆಂದೂ ಮಾರಸಿಂಹ 812 ರ ತರುವಾಯ ಸ್ವತಂತ್ರವಾಗಿ ಆಳಿದನೆಂಬ ಅಭಿಪ್ರಾಯವೂ ಇದೆ, ಆದರೆ ಮಾರಸಿಂಹ ಸ್ವತಂತ್ರ ರಾಜನಾಗಿ ಆಳಿದ ಬಗ್ಗೆ ಆಧಾರಗಳಿಲ್ಲ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ